ಕೀರ್ತಿವರ್ಮ 1

(ಬಾದಾಮಿ ಚಾಳುಕ್ಯ) : ಬಾದಾಮಿ ಚಾಳುಕ್ಯ ಮನೆತನದ 2ನೆಯ ಅರಸ. 2ನೆಯ ಪುಲಿಕೇಶಿಯ ಮಗ. ಅವನ ಮರಣಾನಂತರ ಪಟ್ಟಕ್ಕೆ ಬಂದ (ಸು. 566-ಸು. 597). ಇವನಿಗೆ ಕೀರ್ತಿರಾಜ, ಕತ್ತಿ ಅರಸ ಎಂಬ ಹೆಸರುಗಳ ಜೊತೆಗೆ ವಲ್ಲಭ, ಪೃಥ್ವೀವಲ್ಲಭ, ಸತ್ಯಾಶ್ರಯ ಮತ್ತು ಪುರುರಣ ಪರಾಕ್ರಮ ಎಂಬ ಬಿರುದುಗಳೂ ಇದ್ದುವು. ಕೊಂಕಣ ಪ್ರದೇಶದಲ್ಲಿ ಪುರಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಮೌರ್ಯ ಶಾಖೆಯನ್ನೂ ಬನವಾಸಿಯ ಕದಂಬರನ್ನೂ ಈಗಿನ ಬಳ್ಳಾರಿ ಮತ್ತು ಕರ್ನೂಲುಗಳ ಮಧ್ಯದಲ್ಲಿದ್ದ ನಳರನ್ನೂ ಸೋಲಿಸಿ ಈತ ತನ್ನ ಅಧಿಕಾರವನ್ನು ವಿಸ್ತರಿಸಿದ. ಈ ವಿಜಯಗಳ ಜ್ಞಾಪಕಾರ್ಥವಾಗಿ ಅಗ್ನಿಷ್ಟೋಮ, ಬಹುಸುವರ್ಣ ಮೊದಲಾದ ಯಾಗಗಳನ್ನು ಆಚರಿಸಿದ. ಈತ ಬಾದಾಮಿಯ ಕೋಟೆಯನ್ನು ವಿಸ್ತರಿಸಿ ಭದ್ರಪಡಿಸಿದನಲ್ಲದೆ ಬಾದಾಮಿಯ ಗುಡ್ಡದಲ್ಲಿ ಕೆಲವು ಗುಹಾಲಯಗಳನ್ನು ಕೊರೆಸಿದ. ಕೀರ್ತಿವರ್ಮನ ಆಜ್ಞಾನುಸಾರವಾಗಿ ಅವನ ತಮ್ಮ ಮಂಗಳೇಶ ಬಾದಾಮಿಯಲ್ಲಿ ಸುಂದರವಾದ ವಿಷ್ಣು ದೇವಾಲಯವನ್ನು ಕಟ್ಟಿಸಿದುದಾಗಿ ಮಹಾಕೂಟ ಶಾಸನ ತಿಳಿಸುತ್ತದೆ. ಕೀರ್ತಿವರ್ಮನ ರಾಣಿ ದುರ್ಲಭದೇವಿ ಸೇಂದ್ರಕ ಮನೆತನದವಳು. ಕೀರ್ತಿವರ್ಮ ಮತ್ತು ದುರ್ಲಭದೇವಿಯರಿಗೆ ಇಮ್ಮಡಿ ಪುಲಿಕೇಶಿ, ಕುಬ್ಜ ವಿಷ್ಣುವರ್ಧನ, ಧರಾಶ್ರಯ ಜಯಸಿಂಹ ಮತ್ತು ಬುದ್ಧವರ್ಷ ಎಂಬ ನಾಲ್ವರು ಗಂಡು ಮಕ್ಕಳಿದ್ದರು. ಕೀರ್ತಿವರ್ಮ ಸು. 597ರಲ್ಲಿ ಮರಣ ಹೊಂದಿದಾಗ ಅವನ ಮಕ್ಕಳು ಇನ್ನೂ ಚಿಕ್ಕ ವಯಸ್ಸಿನವರಾಗಿದ್ದುದರಿಂದ ಅವನ ತಮ್ಮ ಮಂಗಳೇಶ ಆಡಳಿತವನ್ನು ವಹಿಸಿದ.            

(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ